ಬುಧವಾರ, ಜುಲೈ 17, 2013

ಹಳ್ಳಿ ಕತೆ ಇಲ್ಲಿ ಕೇಳಿ: ಇನ್ನೂ ಹಸನಾಗಿಲ್ಲ ತಾಮ್ರಗುಂಡಿ ಬದ




 ಸೌಜನ್ಯ: ವಿಜಯ ಕರ್ನಾಟಕ
ಹಳ್ಳಿ ಕತೆ ಇಲ್ಲಿ ಕೇಳಿ: ಕನ್ನಡ ಪತ್ರಿಕೋದ್ಯಮದಲ್ಲೇ ಹೊಸ ಪ್ರಯೋಗ
ವಿಕ ಸುದ್ದಿಲೋಕ | Jul 18, 2013, 04.00AM IST

ವಿಕ ಗ್ರಾಮವಾಸ್ತವ್ಯ

ದೇಶದ ಬೆನ್ನೆಲುಬಾಗಿರುವ ನಮ್ಮ ಗ್ರಾಮಗಳ ಬದುಕು ಹೇಗಿದೆ? ನಗರೀಕರಣದ ಆರ್ಭಟದಲ್ಲಿ ಗ್ರಾಮೀಣ ಪ್ರದೇಶಗಳ ಪ್ರಗತಿ ಎತ್ತಕಡೆ ಸಾಗಿದೆ.. ಸಂಗತಿ ನಮ್ಮನ್ನು ಸದಾ ಕಾಡುತ್ತಿವೆ.

ಕಾರಣಕ್ಕಾಗಿಯೇ ವಿಜಯ ಕರ್ನಾಟಕ ಕನ್ನಡ ಪತ್ರಿಕೋದ್ಯಮದಲ್ಲೇ ಹೊಸ ಪ್ರಯೋಗಕ್ಕೆ ಮುಂದಾಗಿದೆ. ರಾಜ್ಯದ ಹಳ್ಳಿಗಳ ಜೀವನಕ್ಕೆ ಬೆಳಕು ಚೆಲ್ಲುವ 'ಗ್ರಾಮ ವಾಸ್ತವ್ಯ' ಎನ್ನುವ ವಿಶಿಷ್ಟ ಪರಿಕಲ್ಪನೆಗೆ ಚಾಲನೆ ನೀಡುತ್ತಿದೆ.

ನಮ್ಮ ರಾಜ್ಯದಲ್ಲಿ ಒಂದೊಂದು ಗ್ರಾಮ ಒಂದೊಂದು ಕತೆಗಳನ್ನು ಹೇಳುತ್ತವೆ. ಎಲ್ಲ ಕತೆಗಳನ್ನು ನಾವು ಹೆಕ್ಕಿ ಹೆಕ್ಕಿ ತಂದು ನಿಮ್ಮ ಮುಂದೆ ಇಡುತ್ತೇವೆ. ಹಳ್ಳಿಗೆ ಭೇಟಿ ನೀಡುವ ನಮ್ಮ ವರದಿಗಾರರು ಅಲ್ಲಿ ಎರಡು ದಿನಗಳ ಕಾಲ ತಂಗಿ, ಅಲ್ಲಿನ ಜನರ ಜತೆಗೇ ಇದ್ದು, ಅವರ ಬದುಕಿನ ಚಿತ್ರಣವನ್ನು ಕಟ್ಟಿಕೊಡುತ್ತಾರೆ. ಗ್ರಾಮದ ಅಭಿವೃದ್ಧಿಗೆ ಬೆಳಕು ಚೆಲ್ಲುವುದರ ಜತೆಗೆ, ಸರಕಾರಿ ಸೌಲಭ್ಯಗಳು ನಿಜಕ್ಕೂ ಅಲ್ಲಿನ ಜನರಿಗೆ ಸಮರ್ಪಕವಾಗಿ ಮುಟ್ಟುತ್ತಿದೆಯೇ ಎನ್ನುವುದನ್ನು ಖುದ್ದಾಗಿ ಪರಿಶೀಲಿಸುತ್ತಾರೆ. ಶಾಲೆ, ಆಸ್ಪತ್ರೆ, ರಸ್ತೆ, ಸಂಪರ್ಕ, ಕುಡಿಯುವ ನೀರು ಹೀಗೆ ಜನಕ್ಕೆ ಅಗತ್ಯವಾಗಿ ಬೇಕಾದ ಮೂಲಸೌಕರ್ಯಗಳು ಸಿಗುತ್ತಿದೆಯೇ ಎನ್ನುವುದನ್ನು ತಿಳಿದುಕೊಳ್ಳುತ್ತಾರೆ. ಅದಕ್ಕೆ ಸೂಕ್ತ ಪರಿಹಾರವನ್ನು ಕಂಡುಹುಡುಕುವ ಪ್ರಯತ್ನವನ್ನೂ ಮಾಡುತ್ತಾರೆ.

ಒಟ್ಟಾರೆ, ಗ್ರಾಮದ ಸಾಮಾಜಿಕ ಲೆಕ್ಕಪರಿಶೋಧನೆ (ಸೋಷಿಯಲ್ ಆಡಿಟಿಂಗ್) ಮಾಡುವ ಮೂಲಕ ಊರಿನ ಸ್ಥಿತಿಯನ್ನು ಸರಕಾರದ ಗಮನಕ್ಕೆ ತಂದು ಅದರ ಪ್ರಗತಿಗೆ ದಾರಿದೀಪವಾಗುವುದೇ ನಮ್ಮ ಉದ್ದೇಶ.

ವಿಶೇಷ ವರದಿಯನ್ನು ಪ್ರಕಟಿಸುವುದಷ್ಟೇ ಅಲ್ಲ. ಜತೆಗೆ, ಮುಂದಿನ ದಿನಗಳಲ್ಲಿ ಊರಿನ ಬೆಳವಣಿಗೆಗಳ ಕುರಿತು ವಿಕ ಸದಾ ಕಣ್ಣಿಡಲಿದೆ. ಹಳ್ಳಿಗೆ ಹೊಸ ಬೆಳಕು ನೀಡುವುದು ನಮ್ಮ ಆದ್ಯತೆ.
-
ಸಂಪಾದಕ


ಇನ್ನೂ ಹಸನಾಗಿಲ್ಲ ತಾಮ್ರಗುಂಡಿ ಬದುಕು

ಒಂದು ಹಳ್ಳಿಯಲ್ಲಿ 48 ತಾಸುಗಳ ಕಾಲ ಇದ್ದು, ಅಲ್ಲಿನ ಪ್ರಗತಿಗೆ ಬೆಳಕು ಚೆಲ್ಲುವುದು ಗ್ರಾಮವಾಸ್ತವ್ಯದ ಮೂಲ ಉದ್ದೇಶ. ಕನ್ನಡ ಪತ್ರಿಕೋದ್ಯಮದಲ್ಲೇ ಮೊದಲ ಪ್ರಯೋಗ ಇದು. ಪ್ರತಿ 15 ದಿನಕ್ಕೊಮ್ಮೆ ವಿಕ ಗ್ರಾಮವಾಸ್ತವ್ಯ ನಡೆಸಲಿದೆ. ಸರಣಿಯ ಮೊದಲ ಗ್ರಾಮ ಇದು.

*
ರಮೇಶ್ ಜಾಧವ್

ಮೋಡ ಕವಿದ ವಾತಾವರಣ. ಆಗಲೋ ಈಗಲೋ ಮಳೆ ಸುರಿಯುವ ಲಕ್ಷಣ. ಊರು ತಲುಪಬೇಕಿದ್ದರೆ ನಾಲ್ಕು ಕಿಮೀ ನಡೆದುಕೊಂಡೇ ಹೋಗಬೇಕು. ಎರಡು ದಿನಗಳ ಗ್ರಾಮವಾಸ್ತವ್ಯಕ್ಕೆ ನಾನು ಬ್ಯಾಗನ್ನು ಹೆಗಲಿಗೇರಿಸಿ ರಸ್ತೆಗಿ ಳಿದೆ. ಬರದೂರ ಕ್ರಾಸ್ನಿಂದ ತಾಮ್ರಗುಂಡಿ ಎಂಬ ಗ್ರಾಮಕ್ಕೆ ಹೋಗುವ ರಸ್ತೆಗೆ 'ರಸ್ತೆ' ಎನ್ನುವ ಯಾವ ಅರ್ಹ ತೆಯೂ ಇಲ್ಲ. ಅಂಥ ಕಚ್ಚಾ ಹಾದಿಯಲ್ಲಿ ನಿಧಾನವಾಗಿ ಹೆಜ್ಜೆ ಇಟ್ಟೆ. ಇಕ್ಕೆಲಗಳಲ್ಲಿ ಪೊಗದಸ್ತಾಗಿ ಬೆಳೆದ ಬಳ್ಳಾರಿ ಜಾಲಿ, ಅದರಾಚೆ ಹೊಲಗಳಲ್ಲಿ ಗೇಯ್ಮೆನಿರತ ನೇಗಿಲಯೋಗಿಗಳು... ಇದೆಲ್ಲವನ್ನೂ ಕಣ್ತುಂ ಬಿ ಕೊಂಡು ಹೋಗುತ್ತಿರುವಾಗಲೇ ನನ್ನನ್ನು ಸ್ವಾಗತಿ ಸಿದ್ದು ಹಳ್ಳವೊಂದಕ್ಕೆ ಅವೈಜ್ಞಾನಿಕವಾಗಿ ನಿರ್ಮಿಸಲಾದ ಬ್ರಿಜ್ ಕಂ ಬ್ಯಾರೇಜ್. ರಸ್ತೆ ತಿರುವಿನಲ್ಲಿನ ಅತ್ಯಂತ ಇಕ್ಕಟ್ಟಾದ ಸೇತುವೆಗೆ ತಡೆಗೋಡೆ ಇಲ್ಲ. ಈಗ ಸೇತುವೆ ಆದ ನಂತರ ಪರವಾಗಿಲ್ಲ. ಹಿಂದೆ ಮಳೆಗಾಲದಲ್ಲಿ ಹಳ್ಳ ತುಂಬಿ ಹರಿದಾಗ ತಾಮ್ರಗುಂಡಿ ಬಾಹ್ಯ ಜಗತ್ತಿನ ಜತೆ ಸಂಪರ್ಕ ಕಡಿದುಕೊಳ್ಳುತ್ತಿತ್ತು.

ಡಾ. ಡಿ.ಎಂ. ನಂಜುಂಡಪ್ಪ ವರದಿಯಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕೆಂದು ಉಲ್ಲೇಖಿಸಲಾದ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ತಾಮ್ರಗುಂಡಿ ಗ್ರಾಮ ಈಗಲೂ ಅಷ್ಟೇ ಹಿಂದುಳಿದಿದೆ. ಇಷ್ಟಾದರೂ ಇಲ್ಲಿನ ಜನರದ್ದು ಪ್ರಚಂಡ ತಾಳ್ಮೆ. ಸಮಸ್ಯೆಗಳ ಜತೆ ಹೊಂದಾಣಿಕೆ ಮಾಡಿ ಕೊಂಡು ಜೀವನ ನಡೆಸುವ ಕಲೆ ಅರಿತಿದ್ದಾರೆ. ಒಮ್ಮೆಯೂ ಆಡಳಿತದ ವಿರುದ್ಧ ಸಿಡಿದೇಳಲಿಲ್ಲ!

ನನಗೆ ದಾರಿಯಲ್ಲೇ ಸಿಕ್ಕರು, ಅಲ್ಲಿನ ಗ್ರಾಪಂ ಸದಸ್ಯ ಅಮರೇಶ ಹಿರೇಮಠ, ಕುರುವತ್ತೆಪ್ಪ ಅರಿಷಿಣದ, ದೇವೇಂದ್ರಪ್ಪ ಚಿಕ್ಕಣ್ಣವರ, ಚಂದ್ರಪ್ಪ ಶಿರಹಟ್ಟಿ. ಅವರು ನನ್ನನ್ನು ಮೊದಲಿಗೆ ಕರೆದುಕೊಂಡು ಹೋಗಿದ್ದು ತಾಮ್ರಗುಂಡಿ ಕೆರೆಗೆ. ಕೆರೆಯೇ ಊರಿನ ಜೀವಾಳ. ತಾಮ್ರಗುಂಡಿ, ಬರದೂರ, ಶಿರೋಳ ಮತ್ತು ಮುಂಡರಗಿ ಜನತೆಗೆ ನೀರುಣಿಸುವ ಕೆರೆಯ ಒಡ್ಡು ಒಡೆದು 9 ವರ್ಷ ಕಳೆದರೂ ಈವರೆಗೂ ದುರಸ್ತಿ ಕಂಡಿಲ್ಲ. ಸಚಿವರು, ಶಾಸಕರು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಕೊಟ್ಟೂ ಕೊಟ್ಟೂ ಸುಸ್ತಾಗಿದ್ದಾರೆ ಜನ. 255 ಹೆಕ್ಟೇರ್ ಸುತ್ತಳತೆಯ, 0.80 ಘನ ಅಡಿ ನೀರು ಸಂಗ್ರಹ ಸಾಮರ್ಥ್ಯದ ಕೆರೆಯಿಂದ ಒಟ್ಟು 602 ಎಕರೆ ಕ್ಷೇತ್ರ ನೀರಾವರಿಗೆ ಒಳಪಟ್ಟಿವೆ. ಆದರೆ ಕೆರೆ ಈಗ ಯೂಸ್ಲೆಸ್. ಹಾಗಂತ ಜನಕ್ಕೆ ಕೋಪ ಇಲ್ಲ. ಇದ್ದರೂ ತೋರಿಸಿ ಕೊಳ್ಳುತ್ತಿಲ್ಲ.

ಕೆರೆಯಿಂದ ಗ್ರಾಮಕ್ಕೆ ಬಂದಾಗ ಸೂರ್ಯ ನೆತ್ತಿಯಲ್ಲಿದ್ದ. ಹೊತ್ತಿಗೆ ಯಾವಾಗಲೂ ಇಡೀ ಗ್ರಾಮ ಖಾಲಿ ಖಾಲಿ ಯಾಗಿ ರುತ್ತದೆ. ಬಹುತೇಕ ಜನರು ದುಡಿಯಲು ಮುಂಡರಗಿ ಮತ್ತು ಹೊಲಗಳಿಗೆ ತೆರಳಿದ್ದರು. ಅಲ್ಲೆಲ್ಲೋ ಕೆಲವು ಮಕ್ಕಳು ಆಟ ಆಡುತ್ತಿದ್ದರೆ, ಇನ್ನು ಕೆಲವು ಹಿರಿಯರು ಬೀಡಿ ಅಂಗಡಿ ಮುಂದಿನ ಕಟ್ಟೆ ಮೇಲೆ ಕೂತು ತಮ್ಮ ಪಾಡಿಗೆ ಎಲೆ-ಅಡಕೆ ಮೆಲ್ಲುತ್ತಿದ್ದರು. ಹೋಟೆಲ್ಗಳಲ್ಲಿ ವ್ಯಾಪಾರ ಇರಲಿಲ್ಲ.

ಅಲ್ಲೇ ಇದ್ದ ಪುಟ್ಟ ಬಾಲಕಿಯೊಬ್ಬಳನ್ನು ಕರೆದು ನಾಲ್ಕು ರೂಪಾಯಿ ಕೊಟ್ಟೆ. ಏನೊಂದು ಅರ್ಥವಾಗದೆ ನನ್ನ ಮುಖ ನೋಡಿದಳು. ಎರಡು ರೂಪಾಯಿ ಅಡಕೆ ತರಲು, ಇನ್ನುಳಿದ ಎರಡು ರೂಪಾಯಿ ಚಾಕಲೇಟ್ಗೆ ಎಂದೆ. ಹುಡುಗಿ ಅಡಕೆಯನ್ನಷ್ಟೇ ತಂದು ಎರಡು ರೂಪಾಯಿ ವಾಪಸ್ ಕೊಟ್ಟು ಮಾತಿಗೆ ನಿಲ್ಲದೇ ಓಡಿಹೋದಳು. ಅಬ್ಬಬ್ಬಾ, ಈಕೆಯ ಸ್ವಾಭಿಮಾನ ಎಂದುಕೊಂಡೆ. ಬಹುಶಃ ಇದು ಊರಿನ ಮಂದಿಯಲ್ಲಿ ರಕ್ತಗತವಾಗಿದ್ದಿರಬೇಕು.

ಹಿಂದೆ 15 ಶೌಚಾಲಯ ಕಟ್ಟಿಸಿಕೊಳ್ಳಲು ಅನುದಾನ ಬಂದಿತ್ತು. ಎಪಿಎಲ್ ಕಾರ್ಡ್ ಇದ್ದ ಕುಟುಂಬಕ್ಕೆ ತಲಾ 4300, ಬಿಪಿಎಲ್ ಕಾರ್ಡ್ ಇದ್ದ ಕುಟುಂಬಕ್ಕೆ ತಲಾ 9000 ಹಣ ಬಿಡುಗಡೆಯಾಗಿದ್ದರೂ ಒಂದೇ ಕುಟುಂಬ ಯೋಜನೆಯ ಪ್ರಯೋಜನ ಪಡೆದಿದೆ. ಇನ್ನುಳಿದವರು 'ನೀವು ಕೊಡುವ ಹಣ ಯಾವುದಕ್ಕೆ ಸಾಲುತ್ತೆ' ಎಂದು ಗ್ರಾಪಂಗೇ ಹಣ ವಾಪಸ್ ಕೊಟ್ಟು ದಿನಾ ಬಯಲಿಗೆ ಹೋಗುತ್ತಿದ್ದಾರೆ! ಇದೂ ಸ್ವಾಭಿಮಾನದ ಸಂಕೇತವೇ?

ಉಹುಂ, ನನಗೆ ಅರ್ಥವಾಗಲಿಲ್ಲ. ಏನೇ ಇದ್ದರೂ ನನ್ನ ಗಮನ ಸೆಳೆದಿದ್ದು ಇಲ್ಲಿಯ ಸರಕಾರಿ ಶಾಲೆ. ಒಟ್ಟು 64 ಮಕ್ಕಳು, ನಾಲ್ವರು ಶಿಕ್ಷಕರಿದ್ದಾರೆ. ಶಿಕ್ಷಕರ ಪರಿಶ್ರಮದಿಂದ ಶಾಲೆ ನಂದನವನವಾಗಿ ಮಾರ್ಪಾಡಾಗಿದೆ. ಶೌಚಾಲಯವೇನೋ ವ್ಯವಸ್ಥಿತವಾಗಿದೆ. ಗ್ರಂಥಾಲಯ, ಪ್ರಯೋಗಾಲಯ ಮಾತ್ರ ಇಲ್ಲ. ಪಕ್ಕದ ಬರದೂರಲ್ಲಿ ಇಂಗ್ಲಿಷ್ ಮೀಡಿಯಂ ಶಾಲೆಯಿದ್ದರೂ ಡ್ರಾಪೌಟ್ ಸಮಸ್ಯೆ ಈವರೆಗೂ ಕಾಡಿಲ್ಲ. ಕುಡಿಯಲು ನಳದ ನೀರಿದೆ. ನಾನು ಎರಡೂ ರಾತ್ರಿಯೂ ಇದೇ ಶಾಲೆಯಲ್ಲಿ ತಂಗಿದ್ದೆ.

ಸಂಜೆ ಹೊತ್ತು ಊರಿಗೆ ಕಳೆ ಏರಿತು. ದುಡಿಯಲು ಹೋಗಿದ್ದವರು ಮರಳಿ ಮನೆ ಬರುವ ಸಮಯ. ಅಪ್ಪ-ಅಮ್ಮಂದಿರ ಬರುವಿಕೆಗಾಗಿ ಕಾದಿದ್ದ ಮಕ್ಕಳು ಓಡೋಡಿ ಹೋಗಿ ಕೈಹಿಡಿದು ಮನೆಯತ್ತ ಸಾಗಿದರು. ಇಲ್ಲಿನ ಜನರಿಗೆ ಹೊರ ಊರಿಗೆ ಹೋಗಿ ಬರುವುದೆಂದರೆ ಒಂದು ಬಗೆಯಲ್ಲಿ ವಿದೇಶಕ್ಕೆ ಹೋಗಿ ಬಂದ ಹಾಗೆಯೇ. ಸಣ್ಣಪುಟ್ಟ ಕಾಯಿಲೆಗೂ ಗ್ರಾಮದ ಜನ ದೂರದ ಮುಂಡರಗಿಗೇ ಹೋಗಬೇಕು. ತುರ್ತು ಸಂದರ್ಭಗಳಲ್ಲಿ 108 ನಂಬರ್ಗೆ ಫೋನ್ ಮಾಡಿ ಆಂಬ್ಯುಲೆನ್ಸ್ ಕರೆಸಿಕೊಂಡು ನಂತರ ಮುಂಡರಗಿಗೆ ರೋಗಿಗಳನ್ನು ಕರೆದೊಯ್ಯಬೇಕಾಗುತ್ತದೆ. ಅದು ಬಂದರೆ ಬಂತು; ಉಳಿದರೆ ಉಳಿಯಿತು ಪ್ರಾಣ.

ಶಾಲೆ, ಕಾಲೇಜು ವಿದ್ಯಾರ್ಥಿಗಳು, ಹೊಲ/ಮನೆ ಉತಾರಕ್ಕಾಗಿ ಗ್ರಾಪಂ ಕಚೇರಿ ಹಾರೋಗೇರಿಗೆ (10 ಕಿ.ಮೀ.), ಡಂಬಳದ ರೈತ ಕೇಂದ್ರಕ್ಕೆ - ಹೀಗೆ ಎಲ್ಲಿಗೇ ಹೋಗಬೇಕೆಂದರೂ ನಡೆಯಲೇಬೇಕು. ಸರಕಾರಿ ಬಸ್ಸೊಂದು ಹಿಂದೆ ಬರುತ್ತಿತ್ತಂತೆ. ಈಗ ಅದೂ ನಿಂತಿದೆ. 'ಎರಡು ವರ್ಷಗಳ ಹಿಂದೆ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿ ಮುಂಡರಗಿಯಿಂದ ಬಸ್ ಬಿಡಲಾಗಿತ್ತು. ಜನ ಬಸ್ ಹತ್ತಲಿಲ್ಲ. ಈಗಲೂ ಬೇಡಿಕೆ ಬಂದರೆ ಬಸ್ ಬಿಡಲಾಗುವುದು ಎನ್ನುತ್ತಾರೆ ವಾಕರಾರ ಸಂಸ್ಥೆ ವ್ಯವಸ್ಥಾಪಕ ನಿರಂಜನಮೂರ್ತಿ.

ಎಲ್ಲಿದೆ ರೋಡು?

ಇಲ್ಲಿ ಯಾವುದೇ ಓಣಿಗೆ ಕಾಲಿಟ್ಟರೂ ಡಾಂಬರ್ ರಸ್ತೆ ಕಾಣಸಿಗಲ್ಲ. ಬರದೂರು ಸಂಪರ್ಕಿಸುವ ರಸ್ತೆ ಅರ್ಧ ಡಾಂಬರೀಕರಣವಾಗಿದ್ದರೆ ಇನ್ನರ್ಧ ಕಚ್ಚಾ ರಸ್ತೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಅಂದಾಜು 90.30 ಲಕ್ಷ ರೂ. ವೆಚ್ಚದಲ್ಲಿ ಎರಡು ವರ್ಷಗಳ ಹಿಂದೆ ಕೈಗೆತ್ತಿಕೊಂಡ ತಾಮ್ರಗುಂಡಿ-ಬಸಾಪುರ ರಸ್ತೆ (2.89 ಕಿ.ಮೀ.) ಕಾಮಗಾರಿ ಈಗಲೂ ಚಾಲ್ತಿಯಲ್ಲಿದೆ. ರಸ್ತೆಗಳ ರಿಪೇರಿಗೆ ಸಿಕ್ಕ ಅನುದಾನವೂ ಅಷ್ಟಕ್ಕಷ್ಟೆ. ಗ್ರಾಮ ಪಂಚಾಯಿತಿಯಿಂದ 2012ರಲ್ಲಿ ಬಾವಿ ಹತ್ತಿರದ ಸಾರ್ವಜನಿಕ ರಸ್ತೆಗೆ ನಿಂತ ನೀರು ಹೊರ ಹಾಕಲು 50 ಸಾವಿರ ರೂ., ಹಳೆ ಊರು ರಸ್ತೆ ಅಭಿವೃದ್ಧಿಗೆ 2 ವರ್ಷದ ಹಿಂದೆ ಜಿಲ್ಲಾ ಪಂಚಾಯಿತಿಯಿಂದ ಲಕ್ಷ ರೂ. ಹಾಗೂ ಗ್ರಾಮದ ಪರಿಶಿಷ್ಟರ ಕಾಲೋನಿ ರಸ್ತೆಗೆ ಮೊರಂ ಹಾಕಲು 40 ಸಾವಿರ ರೂ. ಬಿಡುಗಡೆ ಮಾಡಿದ್ದೇ ದೊಡ್ಡ ಸಾಧನೆ. ಅದೇನಾಯಿತೋ ಗೊತ್ತಿಲ್ಲ; ರಸ್ತೆಗಳೆಲ್ಲ ಹಾಗೆಯೇ ಇವೆ.

ಫ್ಲೋರೈಡ್ ಸಮಸ್ಯೆ ಇರುವ ಕಾರಣ ಇಲ್ಲಿನ ಜನ ಎಂದೋ ಬೋರ್ವೆಲ್ ನೀರಿಗೆ ಗುಡ್ಬೈ ಹೇಳಿದ್ದಾರೆ. ಅಂತರ್ಜಲ ಮಟ್ಟವೂ ಸಾಕಷ್ಟು ಕುಸಿದಿದೆ. 200 ಅಡಿ ಆಳದವರೆಗೆ ಬೋರ್ವೆಲ್ ಕೊರೆದರೆ ಮಾತ್ರ ನೀರು ಬೀಳುತ್ತೆ. ಈಗ ತುಂಗಭದ್ರಾ ನದಿಯಿಂದ ನೀರು ಪೂರೈಕೆ ಆಗುತ್ತಿದ್ದರೂ ಅದು ಕುಡಿಯಲು ಯೋಗ್ಯವಿಲ್ಲ ಎನ್ನುವ ಜನರು ಕುಡಿಯುವ ನೀರಿಗಾಗಿಯೇ ಸಣ್ಣದೊಂದು ಪ್ರತ್ಯೇಕ ಕೆರೆ ಹೊಂದಿದ್ದಾರೆ.

''
ನಮ್ಮೂರ ಕೆರೆ ನೀರು ತೆಂಗಿನ ಹಾಲಿದ್ದಂತೆ. ನೀರಿನ ಮುಂದೆ ತುಂಗಭದ್ರಾ ನದಿ ನೀರೂ ಹತ್ತಲ್ಲ. ಎರಡೂ ನೀರನ್ನು ಕುಡಿದು ನೀವೇ ಟೇಸ್ಟ್ ನೋಡಿ'' ಎಂದು ಹೇಳಿ ಕೆಲವರು ನನಗೂ ನೀರು ಕುಡಿಸಿ ಪ್ರಯೋಗಕ್ಕೆ ಒಡ್ಡಿದರು.

ಇಲ್ಲಿ ನೈರ್ಮಲ್ಯ ಅಂದರೇನೆಂದೇ ಗೊತ್ತಿಲ್ಲ. ಗಟಾರು ಇಲ್ಲದೇ ರಸ್ತೆ ಮಧ್ಯೆಯೇ ಕೊಳಚೆ ನೀರು ಹರಿಯುತ್ತದೆ. ಚರಂಡಿ ನಿರ್ಮಾಣಕ್ಕೆಂದು ಎರಡು ಸಲ ಜಿ.ಪಂ.ನಿಂದ 50 ಸಾವಿರದಂತೆ ದೊರೆತ ಅನುದಾನವನ್ನು ಎರಡು ದೇವಳಗಳ ದುರಸ್ತಿಗೆ ಖರ್ಚು ಮಾಡಲಾಗಿದೆ. ಸಹಜವಾಗಿಯೇ ಜನರಿಗೆ ದೇವರೆಂದರೆ ಭಯ-ಭಕ್ತಿ ಹೆಚ್ಚು. ಇದಲ್ಲದೇ 2012ರಲ್ಲಿ ಗ್ರಾಪಂನಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬಿಡುಗಡೆಯಾದ 50 ಸಾವಿರ ಮತ್ತು 60 ಸಾವಿರ ಹಣವನ್ನು ಕ್ರಮವಾಗಿ ಅಂಗನವಾಡಿ ಮೈದಾನ ಸ್ವಚ್ಛತೆಗೆ ಕುಡಿಯುವ ನೀರಿನ ಕೆರೆ ಹೂಳೆತ್ತಲು ಬಳಸಲಾಗಿದೆ. 13ನೇ ಹಣಕಾಸು ಯೋಜನೆಯಲ್ಲಿ ಬಿಡುಗಡೆಯಾದ ಹಣವನ್ನೂ ಸ್ವಚ್ಛತಾ ಕಾರ್ಯಕ್ಕೆ, ತಾ.ಪಂ. ಅನುದಾನವನ್ನು ದೇಗುಲ ಗಳಿಗೆ ಸೋಲಾರ್ ಲೈಟ್ ವ್ಯವಸ್ಥೆ, ಶಾಲೆಗೆ ಕಂಪ್ಯೂಟರ್, ಡೆಸ್ಕ್ ಮತ್ತಿತರ ಸಾಮಗ್ರಿಗೆ ಬಳಸಿದ್ದು ಬಿಟ್ಟರೆ ಕಣ್ಣಿಗೆ ಕಾಣುವಂತಹ ಅಭಿವೃದ್ಧಿ ಕಾಮಗಾರಿ ಇಲ್ಲಿ ಆಗಿಯೇ ಇಲ್ಲ. 2012-13ನೇ ಸಾಲಿನಲ್ಲಿ ಗಟಾರು ನಿರ್ಮಾಣಕ್ಕೆ 40 ಸಾವಿರ ವೆಚ್ಚದ ಕ್ರಿಯಾಯೋಜನೆ ಆಗಿದೆ.

ಬಸವ ವಸತಿ ಯೋಜನೆಯಡಿ 42 ಫಲಾನುಭವಿಗಳಿಗೆ ಆಶ್ರಯ ಮನೆ ಮಂಜೂರಿ ಆಗಿದ್ದವು. ಪೈಕಿ 25 ಜನ ಮನೆ ನಿರ್ಮಿಸಿಕೊಂಡಿದ್ದಾರೆ. 8 ಜನರ ಮನೆಗಳು ರದ್ದಾಗಿವೆ. ''ಬಡ್ಡಿಗೆ ಸಾಲ ತಂದು 30 ಸಾವಿರ ರೂ. ಖರ್ಚುಮಾಡಿ ಪ್ಲಿಂತ್ ಹಾಕಿದ್ದೇವೆೆ. ಆದರೆ ಜಿಪಿಎಸ್ ಆಗಲಿಲ್ಲ. 8 ತಿಂಗ ಳಿಂದ ಮಾಸಿಕ 900 ರೂ. ಬಡ್ಡಿ ತುಂಬುತ್ತಿದ್ದೇನೆ'' ಎಂದು ಈರಮ್ಮ ಹವಳದ ತಮ್ಮ ಕಷ್ಟ ತೋಡಿ ಕೊಳ್ಳುತ್ತಾರೆ.

ಈವರೆಗೆ 37 ಫಲಾನುಭವಿಗಳು ಭಾಗ್ಯಲಕ್ಷ್ಮೀ ಯೋಜನೆ ಲಾಭ ಪಡೆದಿದ್ದಾರೆ. ಒಬ್ಬರಿಗೆ ಬಿಟ್ಟರೆ ಉಳಿದವರಿಗೆ ಈಗಾಗಲೇ ಬಾಂಡ್ ವಿತರಿಸಲಾಗಿದೆ ಎಂದು ಸರಕಾರಿ ಅಂಕಿ ಅಂಶ ಹೇಳುತ್ತದೆ. ಆದರೆ ಗ್ರಾಮದಲ್ಲಿ ಪರಿಶೀಲನೆ ಮಾಡಿದಾಗ ಇನ್ನೂ ಒಬ್ಬರಿಗೂ ಬಾಂಡ್ ಸಿಕ್ಕಿಲ್ಲ! ಆದರೂ ಜನ ಸುಮ್ಮನಿದ್ದಾರೆ.

***

ಹೊಸ ತಾಮ್ರಗುಂಡಿ

ಈಗಿನ ತಾಮ್ರಗುಂಡಿಯಿಂದ ಅನತಿ ದೂರದಲ್ಲಿ ಹಳೆ ಗ್ರಾಮವಿದೆ. ನೂರಾರು ವರ್ಷಗಳ ಹಿಂದೆ ಒಮ್ಮೆ ನಂದಿವೇರಿ ಶ್ರೀಗಳು ಹುಲಿ ಸವಾರಿ ಮೂಲಕ ನಾಗರಹಾವನ್ನೇ ಬಾರುಕೋಲು ಮಾಡಿಕೊಂಡು ಹಳೆ ಊರಿಗೆ ಬಂದಿದ್ದರು. ಆಗ ಅವರನ್ನು ಸ್ವಾಗತಿ ಸಲು ಪೂಜ್ಯ ಬಿಷ್ಟಪ್ಪಯ್ಯನವರು ನಿರ್ಜೀವ ಗೋಡೆ ಮೇಲೆ ಸವಾರಿ ಮಾಡಿ ಕೊಂಡು ಹೋದರು. ಇದನ್ನು ಕಂಡ ಶ್ರೀಗಳು ನಾನು ಜೀವಂತ, ಬಾಯಿ ಇರುವ ಹುಲಿ ಮೇಲೆ ಬಂದಿರುವಾಗ ನೀನು ನಿರ್ಜೀವ ಗೋಡೆ ಮೇಲೆ ಬಂದಿದ್ದೀಯಾ. ತಾಮ್ರಗುಂಡಿ ತಿಪ್ಪೆಗುಂಡಿ ಆಗಲೆಂದು ಶಾಪಕೊಟ್ಟರು. ನಂತರ ಹೊಸ ಊರು ಅಸ್ತಿತ್ವಕ್ಕೆ ಬಂತು. 25 ವರ್ಷಗಳ ಹಿಂದೆ ಹೊಸ ಗ್ರಾಮಕ್ಕೆ ಭೇಟಿ ನೀಡಿದ್ದ ಗವಿಮಠದ 15ನೇ ಪೀಠಾಧಿಪತಿ ಶಿವಶಾಂತವೀರ ಶ್ರೀಗಳು ತಾಮ್ರಗುಂಡಿ ಸುವರ್ಣಗಿಂಡಿಯಾಗಲಿ ಎಂದು ಆಶೀರ್ವದಿಸಿದರು. ಆಮೇಲೆ ಊರು ಉದ್ಧಾರ ಆಯಿತು ಎನ್ನುತ್ತಾರೆ ಸ್ಥಳೀಯ ಹಿರೀಕ ನಿಂಗಪ್ಪ ಫಕ್ಕೀರಪ್ಪ ಹೆಗ್ಗಪ್ಪನವರ.

ಕೊಪ್ಪಳ ಗವಿಮಠದ 15ನೇ ಪೀಠಾಧಿಪತಿ ದಿ. ಶಿವಶಾಂತವೀರ ಶಿವಯೋಗಿ ಮಹಾಸ್ವಾಮೀಜಿ ಮೂಲತಃ ತಾಮ್ರಗುಂಡಿಯವರು. ಗ್ರಾಮದ ಪರಂಪರೆ ಗವಿಮಠಕ್ಕೆ ಒಳಪಟ್ಟಿದೆ. ಮಠದ ಈಗಿನ ಪೀಠಾಧಿಪತಿಗಳೂ ಪ್ರತಿ ವರ್ಷ ಗ್ರಾಮಕ್ಕೆ ಬಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಹೋಳಿ ಹುಣ್ಣಿಮೆಗಿಂತ ಯುಗಾದಿ ದಿನ ಮಾರುತಿ ದೇವಸ್ಥಾನದ ಜಾತ್ರೆ ಅಂಗವಾಗಿ ಭರ್ಜರಿ ಬಣ್ಣದಾಟ ಆಡುವುದು ಊರಿನ ಸಂಪ್ರದಾಯ. ಅಂದು ಮುಳ್ಳಿನ ಗದ್ದಿಗೆ ಮೇಲೆ ಪೂಜಾರಿ ಕುಣಿದು ಕುಪ್ಪಳಿಸುತ್ತಾರೆ. ಡೊಳ್ಳು ಕುಣಿತ, ಪಲ್ಲಕ್ಕಿ ಉತ್ಸವದ ನಂತರ ಎಲ್ಲರೂ ಬೆರೆತು ಹೋಳಿ ಆಡುತ್ತಾರೆ.

***

ಕೆರೆಗೆ ಇಬ್ಬರ ಹಾರ

ತಾಮ್ರಗುಂಡಿಯ ಕುಡಿಯುವ ನೀರಿನ ಕೆರೆ ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಊರ ಹೊರವಲಯದಲ್ಲಿರುವ ಕೆರೆಯಲ್ಲಿ ಅಕಸ್ಮಾತ್ ಯಾರಾದರೂ ಬಿದ್ದರೆ ರಕ್ಷಿಸಲು ಯಾರೂ ಇರುವುದಿಲ್ಲ. ನೀರು ತರಲೆಂದು ಹೋದ ನೀಲಾ ಮಾಲತೇಶಪ್ಪ ಹೆಗ್ಗಪ್ಪನವರ (8) ಎಂಬ ಬಾಲಕಿ ಹಾಗೂ ಕೊಟ್ರವ್ವ ಶರಣಪ್ಪ ಅಳವಂಡಿ (22) ಎಂಬ ನವವಿವಾಹಿತೆ ಕೆರೆಯಲ್ಲಿ ಮುಳುಗಿ ಅಸುನೀಗಿದ್ದಾರೆ. ಕೊಟ್ರವ್ವ ಮದುವೆಯಾಗಿ ಬಂದ ಒಂದು ತಿಂಗಳಲ್ಲೇ ಕೆರೆಗೆ ಹಾರವಾಗಿದ್ದು ದುರಂತದ ಸಂಗತಿ.

***

ಅದೊಂದು ಮಳೆಗಾಲದ ದಿನ ಹಳ್ಳ ತುಂಬಿ ಹರಿಯುತ್ತಿತ್ತು. ಬರದೂರು-ತಾಮ್ರಗುಂಡಿ ನಡುವೆ ಇನ್ನೂ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಆಗಿರಲಿಲ್ಲ. ಬರದೂರ ಕಡೆಯಿಂದ ಆಚೆ ದಡದಲ್ಲಿ ಬಂದು ನಿಂತಿದ್ದ ನವ ವಿವಾಹಿತೆಯೊಬ್ಬಳು ಗಂಡನ ಮನೆಗೆ ಬರಲು ಕಾತರದಿಂದ ಕಾದು ಕುಳಿತಿದ್ದಳು. ಇತ್ತ ದಂಡೆಯಲ್ಲಿ ಹುಡುಗನೂ ಮನದನ್ನೆಯ ಬರುವಿಕೆಗಾಗಿ ನಿರೀಕ್ಷಿಸುತ್ತಿದ್ದ. ಏಕೆಂದರೆ ಅಂದು ಅವರ ಪ್ರಥಮ ರಾತ್ರಿ ಇತ್ತು. ಎಷ್ಟು ಹೊತ್ತು ಕಳೆದರೂ ಹಳ್ಳದ ನೀರು ಇಳಿಯುವ ಲಕ್ಷಣವೇ ಕಾಣಲಿಲ್ಲ. ಇಬ್ಬರೂ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ ತೆರಳಿ ವಿರಹವೇದನೆಯಲ್ಲೇ ರಾತ್ರಿ ಕಳೆದರು.

http://timeslog.indiatimes.com/timeslog.dll/pgcnt?RUR=http%3A//vijaykarnataka.indiatimes.com/&SCWD=1138&SCHT=640&CHUR=vijaykarnataka.indiatimes.com&logmviewed=1&msid=21130657&rndr=1&randomno=0.7302460943986554
http://netspiderads2.indiatimes.com/ads.dll/getimage?slotid=38787