ಶನಿವಾರ, ಅಕ್ಟೋಬರ್ 9, 2010

ಜೋಗತಿ ಕಲೆಗೆ ಹೊಸ ಮೆರಗು ತಂದ ಮಂಜಮ್ಮ ಜೋಗತಿ

ಕರ್ನಾಟಕದಲ್ಲಿ ಜೋಗತಿ ಕಲೆಗೆ ಒಂದು ಗೌರವ ತಂದವರಲ್ಲಿ ಕಾಳಮ್ಮ ಜೋಗತಿ ಮೊದಲಿಗರು. ಜೋಗತಿ ಕಲೆಗೆ ಜಾನಪದಶ್ರೀ ಪ್ರಶಸ್ತಿ ಪಡೆದ ಮೊದಲ ಜೋಗತಿಯೂ ಕೂಡ. ಕಾಳಮ್ಮನ ಶಿಷ್ಯೆ ಮಂಜಮ್ಮ ಜೋಗತಿ ಸಧ್ಯ ಜೋಗತಿ ಕಲೆಗೆ ಹೂಸ ಆಯಾಮವನ್ನು ನೀಡುತ್ತಿದ್ದಾರೆ. ಕರ್ನಾಟಕದಾಧ್ಯಂತ ಹಲವಾರು ಕಡೆಗಳಲ್ಲಿ ಮಂಜಮ್ಮ ಜೋಗತಿ ಕಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಅವರೊಂದಿಗೆ ಒಂದು ದೊಡ್ಡ ತಂಡವೇ ಇದೆ. ಕಲೆಯನ್ನೇ ನಂಬಿ ಈ ತಂಡ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಪುಟ್ಟದಾದ ಆಶ್ರಯ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಜೋಗತಿ ಕಲೆಯನ್ನು ಈ ಕಾಲಕ್ಕೆ ಅನ್ವಯಿಸಿ ಹೊಸ ರೂಪ ನೀಡಿ ಪ್ರದರ್ಶನ ನೀಡುವುದು ಮಂಜಮ್ಮನ ಹೊಸ ಸಾಧ್ಯತೆ. ಸರಕಾರ ಆಯೋಜಿಸುವ ಜಾನಪದ ಜಾತ್ರೆಗಳಲ್ಲಿ ಮಂಜಮ್ಮನ ಜೋಗತಿ ಕಲೆ ತುಂಬಾ ಆಕರ್ಷಕವಾಗಿದೆ. ಇಷ್ಟೇ ಅಲ್ಲದೆ ಮಂಜಮ್ಮ ಕರ್ನಾಟಕದ ಜೋಗತಿ ಕಲೆಯನ್ನು ಮಹರಾಷ್ಟ್ರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರ, ನಾಗಪುರ ಅವರಿಂದ ಗುರುತಿಸ್ಪಟ್ಟು ಗುರುಶಿಷ್ಯ ಪರಂಪರೆಯ ಯೋಜನೆಯಡಿ ಅನೇಕರಿಗೆ ಜೋಗತಿ ಕಲೆಯ ತರಬೇತಿಯನ್ನು ನೀಡುತ್ತಿದ್ದಾರೆ.
ಕರ್ನಾಟಕದಲ್ಲಿ ಜನಪದ ಕಲೆಗಳ ಹೊಸ ರೂಪಾಂತರಗಳನ್ನು ಗುರುತಿಸುವ ಮತ್ತು ಅವುಗಳ ಹೊಸ ಬಗೆಯ ರಾಜಕಾರಣವನ್ನು ಅರಿತುಕೊಳ್ಳುವ ಅಧ್ಯಯನಗಳು ನಡೆಯುತ್ತಿಲ್ಲ. ಮಂಜಮ್ಮ ಜೋಗತಿ ಕಲೆಯಲ್ಲಿ ಮಾಡಿರುವ ರೂಪಾಂತರಗಳನ್ನು ನೋಡಿದರೆ, ಅವು ಎಲ್ಲಿಯೂ ದಾಖಲಾಗಿಲ್ಲದಿರುವುದು ಕಂಡುಬರುತ್ತದೆ. ಅಂತಹ ಪ್ರಯತ್ನಗಳು ಈಗಷ್ಟೇ ನಡೆಯಬೇಕಿದೆ. ಮಂಜು ಮಂಜಮ್ಮನಾದ ಕಥಾನಕ ನಿಜಕ್ಕೂ ಹೊಸ ಅನುಭವ ಲೋಕವನ್ನು ತೆರೆದಿಡುತ್ತದೆ. ಅವರ ಬದುಕಿನ ಕಥನ ‘ನಡುವೆ ಸುಳಿವಾತ್ಮ’ ಪುಸ್ತಕ ರೂಪದಲ್ಲಿ ಸಿದ್ದಗೊಳ್ಳುತ್ತಿದೆ. ಮಂಜಮ್ಮ ಮತ್ತು ಅವರ ತಂಡ ಕುರಿತ ಕೆಲವು ಚಿತ್ರಗಳು ಇಲ್ಲಿವೆ.